ಯಶೋಮಿತ್ರ
ಬೌದ್ಧ ದರ್ಶನದ ಸೌತಾಂತ್ರಿಕ ಶಾಖೆಯ ಅನುಯಾಯಿ. ವಸುಬಂಧುವಿನ `ಅಭಿಧರ್ಮಕೋಶದ ಮೇಲೆ ಈತ `ಸ್ಫುಟಾರ್ಥ ಎಂಬ ಭಾಷ್ಯ ಬರೆದಿದ್ದಾನೆ. ವಸುಬಂಧು ವೈಭಾಷಿಕ ಶಾಖೆಯ ನಡುವೆ ಒಂದು ಮುಖ್ಯ ವ್ಯತ್ಯಾಸ ಉಂಟು. ಅದೇನೆಂದರೆ ವೈಭಾಷಿಕರ ಪ್ರಕಾರ ಬಾಹ್ಯವಸ್ತುಗಳ ನೇರ ಪ್ರತ್ಯಕ್ಷ ಸಾಧ್ಯ. ಆದರೆ ಸೌತಾಂತ್ರಿಕರ ಪ್ರಕಾರ ಜ್ಞಾನ ವೈವಿಧ್ಯತೆಯಿಂದ ಮಾತ್ರ ಬಾಹ್ಯ ವಸ್ತುಗಳ ಅಸ್ತಿತ್ವವನ್ನು ಊಹಿಸಬಹುದು. ಈ ಎರಡು ಶಾಖೆಗಳ ನಡುವೆ ವ್ಯತ್ಯಾಸವಿದ್ದರೂ ಪರಸ್ಪರ ಸಂಬಂಧ ಇದ್ದೇ ಇದೆ. ಈ ಅಂಶವನ್ನು ಸೌತಾಂತ್ರಿಕನಾದ ಯಶೋಮಿತ್ರ, ವೈಭಾಷಿಕನಾದ ವಸುಬಂಧುವಿನ `ಅಭಿಧರ್ಮಕೋಶ ದ ಮೇಲೆ ಬರೆದಿರುವ ಭಾಷ್ಯ (ಸ್ಫುಟಾರ್ಥ) ಸ್ಪಷ್ಟಪಡಿಸುತ್ತದೆ.

	ಯಶೋಮಿತ್ರನ ಪ್ರಕಾರ ಸೃಷ್ಟಿಗೆ ಕಾರಣ ಈಶ್ವರನೂ ಅಲ್ಲ. ಪುರುಷನೂ ಅಲ್ಲ (ಚಿತ್), ಪ್ರಧಾನವೂ (ಅಚಿತ್) ಅಲ್ಲ. ಹಾಗಿದ್ದಿದ್ದರೆ ಜಗತ್ತು ಒಂದೇ ಬಾರಿಗೆ ಇಡಿಯಾಗಿ ಸೃಷ್ಟಿಯಾಗಬೇಕಿತ್ತು. ವಸ್ತುವಿನ ಅಸ್ತಿತ್ವದ ಹಿಂದೆ ಕಾರಣಗಳ ಸಂತತಿಯಿದೆ ; ದೇವರು ಸಕಲ ಕಾರಣಗಳ ಮೂಲವಲ್ಲ. ಆದ್ದರಿಂದ ಈ ಜಗತ್ತಿಗೆ ಆದಿ ಎಂಬುದಿಲ್ಲ. ಇದು ಯಶೋಮಿತ್ರನ ವಾದ.

	ಯಶೋಮಿತ್ರನ ಆಸಕ್ತಿಯೆಲ್ಲಾ ಪ್ರತ್ಯಕ್ಷ, ಅನುಮಾನ, ಕ್ಷಣಿಕವಾದ ಮುಂತಾದ ಬೌದ್ಧ ಕಲ್ಪನೆಗಳ ಚರ್ಚೆಯಲ್ಲಿ ಕೇಂದ್ರೀಕೃತವಾಗಿದೆ. ಇವನ ಪ್ರಕಾರ ಸತ್ಯದ ಪ್ರಮಾಣ `ಅರ್ಥಕ್ರಿಯಾಕಾರಿತ್ವ ಅಂದರೆ ಒಂದು ಘಟನೆ ಅಥವಾ ಸನ್ನಿವೇಶ ಸತ್ಯವಾಗಿರಬೇಕಾದರೆ ಅದು ಉಪಯೋಗಕ್ಕೆ ಬರಬೇಕು.

	ಒಟ್ಟಿನಲ್ಲಿ ಈತ ತನ್ನ ಗ್ರಂಥದಲ್ಲಿ ನ್ಯಾಯ, ಸಾಂಖ್ಯ ದರ್ಶನಗಳ ಪ್ರತಿಪಾದನೆಯನ್ನು ಖಂಡಿಸಿದ್ದಾನೆ.		
(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ